ಕೀಟ ನಿಯಂತ್ರಣಕ್ಕೆ ಚೆಂಡು ಹೂ

ನಿಸರ್ಗದಲ್ಲಿ ಬೆಳೆಗಳಿಗೆ ಉಪಯುಕ್ತವಾದ ಕೀಟಗಳು, ಬಾಧೆ ನೀಡುವ ಕೀಟಗಳೂ ಇವೆ. ಕೀಟಗಳು ಆಹಾರ ಅರಸುವುದು ಅತ್ಯಂತ ಸಹಜ ಕ್ರಿಯೆ. ಬಾಧೆ ನೀಡುವ ಕೀಟಗಳಿಗೆ ಬದಲಿ ಆಹಾರದ ಬೆಳೆ ನೀಡಿದಾಗ ಸಮಸ್ಯೆ ಇರುವುದಿಲ್ಲ. ಇಂಥ ಸರಳ ಅಂಶವನ್ನು ಅರ್ಥಮಾಡಿಕೊಳ್ಳದೇ ರಾಸಾಯನಿಕ ಕೀಟನಾಶಕ ಬಳಸಿದಾಗ ಆಗುವ ಅನಾಹುತ ಅಪಾರ. ಬೆಳೆಗಳಿಗೆ ಉಪಯುಕ್ತವಾದ ಕೀಟಗಳೂ ಸಾವನ್ನಪ್ಪುತ್ತವೆ. ಫಸಲು ಮತ್ತು ಅಂತರ್ಜಲ ಕಲುಷಿತವಾಗುತ್ತದೆ. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳೂ ಇಲ್ಲವಾಗುತ್ತವೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಇಂಥ ತೊಂದರೆಗಳನ್ನು ಅತ್ಯಂತ ಸರಳ ಕ್ರಮ ಅನುಸರಿಸುವುದರಿಂದ ನಿವಾರಿಸಿಕೊಳ್ಳಬಹುದು.

ಇಂಥ ಸರಳ ಕ್ರಮಗಳಲ್ಲಿ ಬಲೆ ಬೆಳೆಯೂ ಪ್ರಮುಖ. ಬಲೆ ಬೆಳೆಯೆಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ ಅವಶ್ಯಕತೆಯಿಲ್ಲ. ಯಾವುದಾದರೊಂದು ಅಥವಾ ಎರಡು ಬೆಳೆಯನ್ನು ಬಲೆ ಬೆಳೆಯಾಗಿ ಆಯ್ಕೆ ಮಾಡಬಹುದು. ಚೆಂಡು ಹೂವು ಸಹ ಪ್ರಮುಖ ಬಲೆಬೆಳೆ.

ಹಾನಿಕಾರಕ ಕೀಟಗಳು:
ಬೆಳೆಯನ್ನು ತೀವ್ರವಾಗಿ ಬಾಧಿಸುವ ಕೀಟಗಳಲ್ಲಿ ದುಂಡುಹುಳು ಸಹ ಸೇರಿದೆ. ಮಾರಕ ಕೀಟಗಳು ರಾಸಾಯನಿಕ ಕೀಟನಾಶಕಗಳಿಗೂ ಬಗ್ಗುವುದಿಲ್ಲ. ಇದನ್ನು ನಿಯಂತ್ರಿಸಲು ಖಚರ್ು ಮಾಡುವ ಹಣ, ತೊಡಗಿಸುವ ಶ್ರಮ ಕೂಡ ವ್ಯರ್ಥವಾಗುತ್ತದೆ. ದುಂಡುಹುಳುಗಳು ಜಮೀನಿನ ಮಣ್ಣಿನಲ್ಲಿ ವೃದ್ದಿಯಾಗುತ್ತವೆ. ಇವುಗಳನ್ನು ನಿಯಂತ್ರಿಸಲು ಕೆಲವು ಕ್ರಮಗಳಿವೆ. ಕೆಲ ಅವಧಿ ಜಮೀನು ಬೇಸಾಯ ಮಾಡದೇ ಬಿಡುವುದು, ಜಮೀನಿನಲ್ಲಿ ಹುಲ್ಲು-ಸತ್ತೆ-ಸದೆ ಹಾಕಿ ಬೆಂಕಿ ಹಾಕಿ ಹುಳುಗಳನ್ನು ನಾಶಮಾಡುವುದು, ದುಂಡುಹುಳು ಬಾಧೆ ನಿರೋಧಕ ತಳಿ ಬೆಳೆಸುವುದು, ದುಂಡುಹುಳು ಆಕಷರ್ಿಸದ ಬೆಳೆ ಬೆಳೆಯುವುದು ಇತ್ಯಾದಿ ಕ್ರಮಗಳು. ಆದರೆ ಇವ್ಯಾವುವೂ ಪರಿಣಾಮಕಾರಿಯಲ್ಲ.

ಚೆಂಡು ಹೂ ಇರುವ ಜಮೀನುಗಳಲ್ಲಿ ದುಂಡುಹುಳು ನಿಯಂತ್ರಣದಲ್ಲಿರುವುದು ಕಂಡು ಬಂದಿದೆ. ಕೀಟಗಳನ್ನು ಹೆಚ್ಚಾಗಿ ಆಕರ್ಷಿಸು ಆಲೂಗೆಡ್ಡೆ, ಟೊಮ್ಯಾಟೋ, ಸ್ಟ್ರಾಬೆರಿ, ಗುಲಾಬಿ ಇತ್ಯಾದಿ ಬೆಳೆಗಳಲ್ಲಿ ಚೆಂಡು ಹೂ ಅನ್ನು ಬಲೆ ಬೆಳೆಯಾಗಿ ಬೆಳೆಯುವುದು ಪರಿಣಾಮಕಾರಿ. ಹೂ ಬೆಳೆಯತೊಡಗಿದಂತೆ ಇದರ ಬೇರು ವಿಶಿಷ್ಟ ಬಗೆಯ ದ್ರವ ಒಸರಿಸುತ್ತದೆ. ಇದು ಮಣ್ಣಿನಲ್ಲಿ ವೃದ್ದಿಯಾದ ದುಂಡುಹುಳು ನಾಶಪಡಿಸಲು ಸಹಕಾರಿ.

ಟೊಮ್ಯಾಟೋ, ಮೆಣಸಿನಕಾಯಿ, ಸ್ಟ್ರಾಬೆರಿ, ಇತ್ಯಾದಿ ಬೆಳೆ ಬೆಳೆಯುವ ರೈತರು ಇವುಗಳನ್ನು ನಾಟಿಮಾಡುವಾಗ ಪ್ರತಿ ಎಂಟುಸಾಲುಗಳ ನಂತರ ಒಂದುಸಾಲು ಚೆಂಡುಹೂ ಸಸ್ಯಗಳನ್ನು ನಾಟಿಮಾಡಬೇಕು. ಇದಕ್ಕಾಗಿಯೇ ಪ್ರತ್ಯೇಕ ಸಸಿಮಡಿಯಲ್ಲಿ ಚೆಂಡುಹೂ ಸಸಿ ಬೆಳೆಸಿಕೊಂಡಿರಬೇಕು. ನಾಟಿಮಾಡುವ ಸಂದರ್ಭದಲ್ಲಿ ಚೆಂಡುಹೂ ಸಸಿಗಳಿಗೆ 40 ದಿನಗಳು, ಪ್ರಮುಖ ಬೆಳೆಯ ಸಸ್ಯಗಳಿಗೆ 25 ದಿನಗಳಾಗಿರಬೇಕು. ಟೊಮ್ಯಾಟೋ ಗಿಡಗಳಲ್ಲಿ ಹೀಚು ಬಲಿಯುತ್ತಿದಂತೆ ಕಾಯಿಕೊರಕಗಳ ಹಾವಳಿ ಚೆಂಡುಹೂ ಬೆಳೆಯಲ್ಲಿ ಶುರುವಾಗುತ್ತದೆ. ಆಗ ಕೀಟಗಳನ್ನು ಸಂಗ್ರಹಿಸಿ ಕೋಳಿಗಳಿಗೆ ಆಹಾರವಾಗಿ ನೀಡಬಹುದು.

ಕಪ್ಪುಮಣ್ಣಿನಲ್ಲಿ ನೀರಾವರಿಯಲ್ಲಿ ಹತ್ತಿ ಬೆಳೆದಾಗ ಕಂದುಕಾಯಿಕೊರಕ, ಅಮೆರಿಕನ್ ಕಾಯಿಕೊರಕ ಬಾಧೆ ಸಾಮಾನ್ಯವೆನ್ನಿಸಿದೆ. ಇವುಗಳನ್ನು ನಿಯಂತ್ರಿಸಲು ಚೆಂಡುಹೂ ಬೆಳೆಯನ್ನು ಪೂರಕವಾಗಿ ಬೆಳೆಯಬೇಕು. ಹತ್ತಿಗಿಡಗಳ ನಡುವೆ ಚದುರಿದಂತೆ ಚೆಂಡುಹೂ ಸಸಿಗಳನ್ನು ನೆಡಬೇಕು. ಆಗ ಕಾಯಿಕೊರಕಗಳು ಚೆಂಡುಹೂವಿನತ್ತ ಆಕರ್ಷಿತವಾಗುತ್ತವೆ. ಅಲ್ಲೇ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಹತ್ತಿಗೆ ಇವುಗಳ ಬಾಧೆ ಗಣನೀಯವಾಗಿ ಕಡಿಮೆಯಾಗುತ್ತದೆ.

ದುಂಡು ಜಂತುಗಳಿರುವ ಮಣ್ಣಿನಲ್ಲಿ ಬಾಳೆಕೃಷಿ ಮಾಡಿದಾಗ ಬಾಳೆಬೇರುಗಳಲ್ಲಿ ಕಪ್ಪುಚುಕ್ಕೆಗಳಾಗುತ್ತವೆ. ಹುಳುಗಳ ಮೊಟ್ಟೆಗಳಿಂದ ಹೊರಬರುವ ಮರಿಕೀಟಗಳು ಬೇರನ್ನು ಸಂಪೂರ್ಣವಾಗಿ ಕೊಳೆಯುವಂತೆ ಮಾಡುತ್ತವೆ. ಇದು ಗಿಡದ ಬೆಳವಣಿಗೆಗೆ ಮಾರಕ. ಗಿಡಗಳು ಸೊರಗಿ ಗೊನೆಗಳ ಗಾತ್ರವೂ ಕ್ಷೀಣಿಸುತ್ತದೆ. ಶಿಲಿಂಧ್ರ ರೋಗಗಳು ಹರಡಿ ಬಾಳೆಗಿಡಗಳು ಸೊರಗುತ್ತವೆ. ಫಸಲು ನಷ್ಟವಾಗುತ್ತದೆ. ಇಂಥ ತೊಂದರೆಗಳನ್ನು ಚೆಂಡು ಹೂ ಸಸ್ಯಗಳು ನಿವಾರಿಸುತ್ತವೆ. ಬಾಳೆತೋಟದಲ್ಲಿ ಬಾಳೆಗಿಡಗಳ ಸಾಲಿನ ನಡುನಡುವೆ ಮತ್ತು ತೋಟದ ಸುತ್ತಲೂ ಚೆಂಡುಹೂ ಸಸಿಗಳನ್ನು ಬೆಳೆಸುವುದರಿಂದ ದುಂಡುಜಂತುಗಳ ನಿಯಂತ್ರಣ ಮಾಡಬಹುದು.

6 comments:

 1. ಕುಮಾರರೇ ನಮ್ಮೂಕಡೆ ಇದರ ಬಹೂಪಯೋಗವಿದೆ.ಹಿಂದಕ್ಕೆ ಜಾನುವಾರುಗಳಿಗೆ ಗಾಯಗಳಾದರೆ ಚಂಡುಹೂವಿನ ಗಿಡದ ಎಳೆಗಳನ್ನು ಅರೆದು ಅದಕ್ಕೊಂದಷ್ಟು ತೆಂಗಿನ ಚಿಪ್ಪಿನಮಸಿ ಇತ್ಯಾದಿ ಮಿಶ್ರಣಮಾಡಿ ಹಚ್ಚುತ್ತಿದ್ದರು. ಆಗಲೇ ನನಗೆ ತಿಳಿದದ್ದು ಚಂಡು ಹೂವಿನ ಗಿಡಕ್ಕೆ ಕ್ರಿಮಿನಾಶಕ ಗುಣವಿದೆ ಎಂಬುದು, ಲೇಖನ ಮಾಹಿತಿಪೂರ್ಣ, ರೈತರಿಗೆ ಉಪಯುಕ್ತ! ಶುಭಾಶಯಗಳು

  ReplyDelete
 2. ಉಪಯುಕ್ತ ಮಾಹಿತಿ, ನಿಮಗೆ ದನ್ಯವಾದಗಳು..

  ReplyDelete
 3. Anonymous6:15:00 PM

  ಹಳಬರಿಗೆ ಮಾತ್ರ ಈ ಬಗ್ಗೆ ಗೊತ್ತಿತ್ತು....

  ReplyDelete
 4. ಉಪಯುಕ್ತ ಮಾಹಿತಿ, ನಿಮಗೆ ದನ್ಯವಾದಗಳು. ರೈತರಿಗೆ ಉಪಯುಕ್ತ

  ReplyDelete
 5. Anonymous4:09:00 PM

  good information.thank u

  ReplyDelete

ವಿಡಿಯೋ