ಹಳ್ಳಿಕಾರ್ ರಾಸು ಸಾಕಾಣಿಕೆ ನನ್ನ ಖಾಯಷ್

ರಾಮಕೃಷ್ಣಪ್ಪ ಅವರಿಗೆ ವಯಸ್ಸು ಎಪ್ಪತ್ತು ಮೀರಿದೆ. ಆದರೂ ಹಳ್ಳಿಕಾರ್ ರಾಸುಗಳನ್ನು ಚೆಂದವಾಗಿ ಸಾಕಾಣಿಕೆ ಮಾಡುವ ಹುಮ್ಮಸ್ಸು ಕಡಿಮೆಯಾಗಿಲ್ಲ. 'ಚಿಕ್ಕಂದಿನಿಂದಲೂ ಈ ರಾಸುಗಳ ಪಾಲನೆ-ಪೋಷಣೆ ಮಾಡುವುದು ತನಗೆ ಖುಷಿಯ ಸಂಗತಿ' ಎನ್ನುತ್ತಾರೆ. ಈ ಪ್ರವೃತ್ತಿಗೆ ಇವರ ಮಗ ಜಯಣ್ಣ ಕೂಡ ಸಾಥ್ ನೀಡಿದ್ದಾರೆ

ರಾಮಕೃಷ್ಣಪ್ಪ ಅವರು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಸಮೀಪದ ಎಂ. ಹೊಸೂ ಗ್ರಾಮದವರು. ಪಾರಂಪಾರಿಕವಾಗಿ ಕೃಷಿ ಮಾಡುತ್ತಾ ಬಂದ ಮನೆತನ. ಮೂರು ದಶಕಗಳ ಮೊದಲು ಇವರ ಮನೆಯಲ್ಲಿ ರಾಸು-ಹೈನುರಾಶುಗಳ ಸಮೃದ್ದಿ. ಈಗ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಇವುಗಳ ಸಾಕಾಣಿಕೆಯಲ್ಲಿ ಇವರು ಪಡುತ್ತಿರುವ ಸಂತೋಷ ಕಡಿಮೆಯಾಗಿಲ್ಲ

'ಹಳ್ಳಿಕಾರ್ ಎತ್ತುಗಳ ಗತ್ತು-ಗೈರತ್ತು ಮನಮೋಹಕ. ಅವುಗಳ ಬುದ್ದಿ ಮನುಷ್ಯರಷ್ಟೇ ಸೂಕ್ಷ್ಮ. ಸಮಯದಲ್ಲಿ ತಮ್ಮ ಪ್ರಾಣ ಕೊಟ್ಟಾದರೂ ಸಾಕಿದವರನ್ನು ಉಳಿಸುತ್ತವೆ. ಇವು ದುಡಿಮೆಗೆ-ಹೊರೆ ಎಳೆಯುವುದಕ್ಕೆ-ಷೋಕಿಗೆ ಸಾಕುವುದಕ್ಕೂ ಸೈ. ರಾಸುಗಳಿಗೆ ಪರಿಸರಕ್ಕೆ ಹೊಂದಿಕೊಳ್ಳುವ ಗುಣವಿರುವುದರಿಂದ ಸಾಕಾಣಿಕೆ ಸುಲಭ. ಆದ್ದರಿಂದಲೇ ಬಡವ-ಬಲ್ಲಿದನಿಗೂ ಇವು ಅಚ್ಚುಮೆಚ್ಚು' ಎನ್ನುತ್ತಾರೆ.

ರಾಮಕೃಷ್ಣಪ್ಪ ಅವರು ಹಳ್ಳಿಕಾರ್ ಎತ್ತುಗಳನ್ನು ಸಾಕಾ??ಕೆ ಮಾಡುವುದರಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖ್ಯಾತಿ ಪಡೆದವರು. ಇಂದಿಗೂ ರಾಸುಗಳ ಸಾಕಾಣಿಕೆ ವಿಚಾರದಲ್ಲಿ ಇವರ ಸಲಹೆ ಕೇಳುವವರು ಸಾಕಷ್ಟು ಮಂದಿ ಇದ್ದಾರೆ. ಯಾವ ರಾಸು ದುಡಿಮೆಗೆ ಸೂಕ್ತವಾಗುತ್ತದೆ ಅಥವಾ ಇಲ್ಲ ಎಂಬುದನ್ನು ಅದರ ಗುಣಲಕ್ಷಣ ತಿಳಿದು ಕೆಲವೇ ಕ್ಷಣಗಳಲ್ಲಿ ಹೇಳುತ್ತಾರೆ. ಹಳ್ಳಿಗರಲ್ಲಿ ಹಳ್ಳಿಕಾರ್ ರಾಸು ಸಾಕಾಣಿಕೆ ಮಾಡುವುದರಲ್ಲಿ ಎರಡು ರೀತಿಯ ಪ್ರವೃತ್ತಿ ಇದೆ. ಖಾಯಷ್ಗಾಗಿ, ಸಂತೋಷಕ್ಕೆ  ಸಾಕಾಣಿಕೆ ಮಾಡುವ ಪ್ರವೃತ್ತಿ. ಇನ್ನೊಂದು ದುಡಿಮೆ ಸಲುವಾಗಿಯೇ ಸಾಕಾಣಿಕೆ ಮಾಡುವುದು. ರಾಮಕೃಷ್ಣಪ್ಪ ಅವರಲ್ಲಿ ಎರಡೂ ಪ್ರವೃತ್ತಿಯೂ ಇದೆ. ಅತ್ಯಂತ ಸೊಗಸಾಗಿ ರಾಸುಗಳನ್ನು ಸಾಕಿ ರೈತಾಪಿಗಳಿಂದ ಭೇಷ್ ಎನ್ನಿಸಿಕೊಂಡಿದ್ದಾರೆ. ಮೆಚ್ಚುಗೆ ಈಗಲೂ ಮುಂದುವರೆದಿದೆ

ಖಾಯಷ್ಗಾಗಿಯೇ ಸಾಕಿದ ಎತ್ತುಗಳಿಂದ ಸಾಮಾನ್ಯವಾಗಿ ಹೊರೆಯ ಗಾಡಿ ಎಳೆಸುವುದಿಲ್ಲ. ಏರು ಹೆಚ್ಚು ಕಟ್ಟುವುದಿಲ್ಲ. ಶ್ರಮದಾಯಕವಾದ ಕೃಷಿ-ಕೆಲಸಗಳನ್ನು ಇಂಥ ಎತ್ತುಗಳಿಂದ ಮಾಡಿಸುವುದಿಲ್ಲ. ಇದಕ್ಕೆ ಕಾರಣ ಅವುಗಳ ಮೈಕಟ್ಟು ಹಾಳಾಗುತ್ತದೆ. ಸತತವಾಗಿ ಭಾರದ ನೊಗ ಕಟ್ಟುವುದರಿಂದ ಹೆಗಲು ಬಾವು ಬರಬಹುದು. ಇದರಿಂದ ಅದರ ಸೌಂದರ್ಯ ಹಾಳಾಗಬಹುದು ಎಂಬ ಎಚ್ಚರಿಕೆ ಇದಕ್ಕೆಲ್ಲ ಕಾರಣ

ಆಯ್ಕೆ: ರಾಮಕೃಷ್ಣಪ್ಪ ಅವರು ಖಾಯಷ್ಗಾಗಿ ಹಳ್ಳಿಕಾರ್ ರಾಸು ಸಾಕಾಣಿಕೆ ಪ್ರಾರಂಭ ಮಾಡಿ ಐದು ದಶಕಕ್ಕೂ ಹೆಚ್ಚು ಕಾಲಸಂದಿದೆ. ಆಗಿನಿಂದಲೂ ಅವರು ಖಾಯಷ್ಗಾಗಲಿ ಅಥವಾ ದುಡಿಮೆಗಾಗಲಿ ಎತ್ತುಗಳನ್ನು ಖರೀದಿಸುವಾಗ ಭಾರಿ ಗಮನ ನೀಡುತ್ತಾರೆ. ಪ್ರಖ್ಯಾತವಾದ ಜಾತ್ರೆಗಳಿಗೆ ಭೇಟಿ ನೀಡುತ್ತಾರೆ. ಸೂಕ್ತವಾದ ರಾಸುಗಳಿಗೆ ಅರಸುತ್ತಾರೆ. ಎತ್ತುಗಳನ್ನು ಇವರು ತರುವುದಿಲ್ಲ. ಬದಲಿಗೆ ಹಳ್ಳಿಕಾರ್ ತಳಿಯ ಹಲ್ಲು ಮೂಡದ ಕರು ಅಥವಾ ಎರಡು ಹಲ್ಲುಗಳ ಕರುಗಳನ್ನು ಆಯ್ಕೆ ಮಾಡುತ್ತಾರೆ. ಸುಳಿ-ಸುದ್ದ ನೋಡುತ್ತಾರೆ. ನಿಂತಾಗ ಮತ್ತು ನಡೆಯುವಾಗ ಅದರ ಕಾಲುಗಳ ರಚನೆಯನ್ನು ಗಮನಿಸುತ್ತಾರೆ. ಸೂಕ್ತ ಎನ್ನಿಸಿದರೆ ಮಾತ್ರ ಆಯ್ಕೆ

ಸಾಕಾಣಿಕೆ: 
ಕರು ತಮ್ಮ ಸುಪರ್ದಿಗೆ ಬಂದ ಕ್ಷಣದಿಂದಲೇ ಅದರ ಮುತುವರ್ಜಿ ವಹಿಸುತ್ತಾರೆ. ದೂರದ ಜಾತ್ರೆಯಲ್ಲಿ ಖರೀದಿಸಿದ ಕರುಗಳಾದರೆ ವಾಹನದಲ್ಲಿ ಗ್ರಾಮಕ್ಕೆ ತರುತ್ತಾರೆ. ಮನೆಯ ಹೆಣ್ಣುಮಕ್ಕಳು ಆರತಿ ಎತ್ತಿ, ಹಣೆಗೆ ತಿಲಕವಿಡುವುದರ ಮುಖಾಂತರ ಕರುಗಳನ್ನು ಸ್ವಾಗತಿಸುತ್ತಾರೆ

ಬಿಸಿನೀರು ಸ್ನಾನ-ತುಪ್ಪದ ರೊಟ್ಟಿ: ಪ್ರತಿದಿನ ಹದವಾದ ಬಿಸಿನೀರಿನಿಂದ ಚೆನ್ನಾಗಿ ರಾಸುಗಳ ಮೈ ತೊಳೆದು ಸ್ವಚ್ಚವಾದ ಬಟ್ಟೆಯಲ್ಲಿ ಒರಸುತ್ತಾರೆ. ಕೊಟ್ಟಿಗೆಯಲ್ಲಿಯೇ ಸದಾ ಕಟ್ಟುವುದಿಲ್ಲ. ಹೊರಗೆ ಕಟ್ಟಿದರೂ ದಿನವೆಲ್ಲ ಒಂದೇ ಸ್ಥಳದಲ್ಲಿ ಕಟ್ಟುವುದಿಲ್ಲ. ಇವುಗಳ ಊಯ್ದ ಗಂಜಲ ಅಲ್ಲಿಯೇ ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಮಾಡಿರುತ್ತಾರೆ. ಸಗಣಿಯನ್ನು ಕೂಡಲೇ ಎತ್ತಿ ಬೇರೆಡೆ ಹಾಕುತ್ತಾರೆ. ಪ್ರತಿದಿನ ಅವುಗಳಿಗೆ ಹಿತವಾಗುವಂತೆ ನಾರಿನಿಂದ ಮೈ ಉಜ್ಜುತ್ತಾರೆ. ಆಗಾಗ ಎಣ್ಣೆ ಹಾಕಿ ಮಾಲೀಷ್ ಮಾಡುತ್ತಾರೆ. ಮುಂಜಾಗ್ರತೆಯಾಗಿ ಪಶುಚಿಕಿತ್ಸಾಲಯಗಳಲ್ಲಿ ರೋಗನಿರೋಧಕ ಚುಚ್ಚುಮದ್ದು ನೀಡಿಸುತ್ತಾರೆ

ಪ್ರತ್ಯೇಕ ಬಾನಿ-ಗೊಂತು: ಇವುಗಳಿಗೆ ಕಸಮುಸುರೆ ನೀರು ಕುಡಿಸುವುದಿಲ್ಲಬೂಸಾ-ಹಿಂಡಿ-ನೀರು ನೀಡಲು ಪ್ರತ್ಯೇಕವಾಗಿ ಬಾನಿ-ಬಕೇಟುಗಳನ್ನು ಇಟ್ಟಿರುತ್ತಾರೆ. ಪ್ರತಿದಿನ ಪ್ರತಿ ಕರುವಿಗೂ ಒಟ್ಟು ಎರಡು ಕೆ.ಜಿ. ಪ್ರಮಾಣದ ಬೂಸಾ, ಹಿಂಡಿ ನೀಡುತ್ತಾರೆ. ಹುರುಳಿ ಕೂಡಾ ತಿನ್ನಿಸುತ್ತಾರೆ. ಕರು ದೊಡ್ಡದಾದಂತೆ ರೀತಿ ತಿಂಡಿ ಕೊಡುವುದರ ಪ್ರಮಾಣ ಹೆಚ್ಚಾಗುತ್ತದೆ. ಇದಲ್ಲದೇ ಗೋಧಿ-ಜೋಳ-ಅಕ್ಕಿ ಇವುಗಳನ್ನು ನುಚ್ಚುಮಾಡಿ ನೀರಿನಲ್ಲಿ ನೆನಸಿ ಕೊಡುತ್ತಾರೆ. ಭತ್ತದ ಹುಲ್ಲು-ರಾಗಿ ಹುಲ್ಲು ಮತ್ತು ಜೋಳದ ಹುಲ್ಲುಗಳನ್ನು ಸಣ್ಣದಾಗಿ ಕತ್ತರಿಸಿ ಹಾಕುತ್ತಾರೆ. ಹಸಿಹುಲ್ಲು ಕೊಡುತ್ತಾರೆ.

ಇದಲ್ಲದೇ ಪ್ರತಿದಿನ ಎಮ್ಮೇಹಾಲು ಕುಡಿಸುತ್ತಾರೆ. ಪ್ರತಿ ರಾಸಿಗೂ ಎರಡು ಲೀಟರ್ ಗಟ್ಟಿ ಹಾಲು ಕುಡಿಸುವುದು ಸಾಮಾನ್ಯ. ಇದಲ್ಲದೇ ಪ್ರತಿದಿನ ಕೊಬ್ಬರಿ ತಿನ್ನಿಸುತ್ತಾರೆ. ತುಪ್ಪದಲ್ಲಿ ನೆನಸಿದ ಅಕ್ಕಿರೊಟ್ಟಿ-ರಾಗಿರೊಟ್ಟಿ-ಜೋಳದ ರೊಟ್ಟಿಗಳನ್ನು ತಿನ್ನಿಸುತ್ತಾರೆ.

ಒಂದು ಜೊತೆ ಹಳ್ಳಿಕಾರ್ ರಾಸುಗಳನ್ನು ಸಾಕಾಣಿಕೆ ಮಾಡಲು ಪ್ರತಿತಿಂಗಳು 8-10 ಸಾವಿರ ರುಪಾಯಿ ಖಚರ್ಾಗುತ್ತದೆ. ರಾಸುಗಳ ಸಾಕಾಣಿಕೆಯಲ್ಲಿಯೇ ದೇವರನ್ನು ಕಾಣುವಂಥ ಮನೋಭಾವನೆಯನ್ನು ಇವರಲ್ಲಿ ಕಾಣಬಹುದು. ಬಸವಣ್ಣ ಚೆನ್ನಾಗಿದ್ರೆ ರೈತನ ಮನೆಯೂ ಚೆನ್ನಾಗಿರುತ್ತದೆ ಎನ್ನುತ್ತಾರೆ

ವಿಳಾಸ: ರಾಮಕೃಷ್ಣಪ್ಪ ತಂದೆ ಹನುಮಂತಪ್ಪ
ಎಂ. ಹೊಸೂರು
ವಯಾ ಬೆಟ್ಟ ಹಲಸೂರು
ಜಾಲ ಅಂಚೆ, ಬೆಂಗಳೂರು ಉತ್ತರ-562 157

No comments:

Post a Comment

ವಿಡಿಯೋ