ಹಲಸು ಮೌಲ್ಯವರ್ಧನೆ-ಕೇರಳ ಸಾಧನೆ


ಕರ್ನಾಟಕದಲ್ಲಿ ಹಲಸು ಪ್ರಧಾನ ಬೆಳೆಯಲ್ಲ. ಜಮೀನು-ತೋಟದ ಬದಿಗಳಲ್ಲಿ ಒಂದೋ ಎರಡೋ ಮರಗಳಿರುತ್ತವೆ. ಹೆಚ್ಚು ಮರಗಳಿರುವೆಡೆಯಲ್ಲಿಯೂ ಇದು ಆದ್ಯತೆಯ ಕೃಷಿಯೇನಲ್ಲ. ಬಹುಮಟ್ಟಿಗೆ ಪ್ರಕೃತಿಯ ಪಾಲನೆಯಿಂದಲೇ ಬೆಳೆವ ಸಸ್ಯವಿದು ಎಂದರೆ ಉತ್ಪ್ರೇಕ್ಷೆ ಮಾತಾಗದು. ಕಾರಣ ಇಲ್ಲಿ ಇದಕ್ಕೆ ಗೊಬ್ಬರ, ನೀರು, ಪ್ರೂನಿಂಗ್ ಇತ್ಯಾದಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆದರೆ ಹಲಸಿನ ಗುಣ ನೋಡಿದಾಗ ಇದು ಅಪತ್ಕಾಲದ ಬಂಧು ಎಂಬುದು ಅರಿವಾಗುತ್ತದೆ. ಇಂಥ ಹಲಸನ್ನು ವಿವಿಧ ರೀತಿ ಮೌಲ್ಯವರ್ಧನೆ ಮಾಡಿ-ವಿಸ್ತಾರ ಮಾರುಕಟ್ಟೆಯನ್ನು ಕಂಡು ಕೊಂಡಿರುವ ಕೇರಳಿಗರ ಸಾಧನೆ ಅಚ್ಚರಿ ಮೂಡಿಸುತ್ತದೆ

ಹಲಸಿನ ತೊಳೆ ತುಂಬ ಸಿಹಿಯಾಗಿದ್ದರೆ ಒಂದಷ್ಟು ತಿನ್ನುತ್ತಾರೆ. ಕೆಲವರು ಚಿಪ್ಸ್-ಹಪ್ಪಳ ಮಾಡುತ್ತಾರೆ. ರೀತಿ ಮಾಡುವುದು ದಕ್ಷಿಣ ಕನ್ನಡ-ಉತ್ತರ ಕನ್ನಡ ಭಾಗಗಳಲ್ಲಿ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಅಲ್ಲಿಯೂ ಇಂಥ ಪರಿಪಾಠ ಕಡಿಮೆಯಾಗಿದೆ. ಇದಕ್ಕೆ ಕಾರಣ ಆಧುನಿಕತೆಯ ನಾಗಲೋಟದೊಂದಿಗೆ ಬಿರುಸಾಗಿ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ. ಇದರಿಂದ ಮನೆಗಳ ತಯಾರಿಕೆಗಷ್ಟೇ ಸೀಮಿತವಾಗಿದ್ದ ಅದೆಷ್ಟೋ ಬಗೆಬಗೆಯ ತಿನಿಸುಗಳಿಂದು ಸಣ್ಣ-ಮಧ್ಯಮ-ಬೃಹತ್ ಪ್ರಮಾಣದ ಕೈಗಾರಿಕೆಗಳ ಸ್ವರೂಪ ಪಡೆದುಕೊಂಡಿದೆ.
  

ಬೆಳವಣಿಗೆಯನ್ನು ನಿರಾಕರಿಸದೇ ಒಪ್ಪಿಕೊಳ್ಳುವಂಥ ಸ್ಥಿತಿ ಇಂದು ಇದೆ. ಮುಂದಿನ ದಿನಗಳಲ್ಲಿ ಇದರ ಸ್ವರೂಪ ಮತ್ತಷ್ಟು ಬಿಗಿಯಾಗುತ್ತಾ , ವಿಸ್ತಾರವಾಗುತ್ತಾ ಹೋಗುವುದು ಖಚಿತ.  ಸಿದ್ಧ ಆಹಾರ ತಯಾರಿಕೆ-ಮಾರಾಟ ಕ್ಷೇತ್ರದಲ್ಲಿ ವಿವಿಧ ರೀತಿಯ ವೈವಿಧ್ಯಮಯ ತಿನಿಸುಗಳು ದೊರೆಯುತ್ತಿವೆ. ಆದರೆ ಇದರಲ್ಲಿ ಹಲಸನ್ನೇ ಆಧಾರಿಸಿದ ತಿನಿಸುಗಳು ಒಂದೆರಡಷ್ಟೇ. ಮೊದಲೇ ಹೇಳಿದ ಹಾಗೆ ಇದು ಆಪತ್ಕಾಲದ ಬಂಧುವಾಗಿದ್ದರೂ ಇದನ್ನು ವಿಧವಿಧವಾಗಿ ಮೌಲ್ಯವರ್ಧನೆ ಮಾಡುವ ಕಲೆಗಾರಿಕೆ ಬಗ್ಗೆ ನಾವೀನ್ನೂ ಅಷ್ಟಾಗಿ ಚಿಂತಿಸಿಲ್ಲ. ಅಷ್ಟರಲ್ಲಿಯೇ ಹಾದಿಯಲ್ಲಿ ನೆರೆಯ ಕೇರಳ ರಾಜ್ಯ ಸಾಕಷ್ಟು ಮುಂದೆ ಸಾಗಿದೆ. ಬಿರುಗಾಲನ್ನಿಟ್ಟು ಮುಂದೆ ಸಾಗುತ್ತಲೇ ಇದೆ. ಅವರ ಸಾಧನೆ ಅನೇಕ ಕಾರಣಗಳಿಗಾಗಿ ಗಮನಾರ್ಹ.

2011, ಜೂನ್ 4 ರಿಂದ 6 ರವರೆಗೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ 'ಹಲಸು-ಆಹಾರ ಸುರಕ್ಷತೆಯ ಕೀಲಿ ಕೈ' ಹೆಸರಿನ ಸಮಾವೇಶ ಆಯೋಜಿತವಾಗಿತ್ತು. ಇದರಲ್ಲಿ ನಾನು  ಭಾಗವಹಿಸಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದ ಆರಂಭದಲ್ಲಿಯೇ ಕೇರಳದಲ್ಲಿ ಮುಂಗಾರು ಆರಂಭವಾಗುತ್ತದೆ. ಅರಬ್ಬಿ ಸಮುದ್ರದ ಮೇಲಿನಿಂದ ರಭಸದಿಂದ ಬರುವ ಮಳೆ ನೋಡಗಳು ನೆಲ ನೋಡುವ ಆರಂಭದ ತಾಣ ಕೇರಳವೇ. ಮಳೆಯಲ್ಲಿ ಇಂಥ ಸಮಾವೇಶ ಹೇಗೆ ನಡೆಯುತ್ತದೋ ಎಂಬ ಆತಂಕ ಕೊಂಚ ಮಟ್ಟಿಗಿತ್ತು. ಸಣ್ಣ-ಪುಟ್ಟ ಕೊರತೆಗಳ ನಡುವೆಯೂ ಸಮಾವೇಶ ಸಮಾಧಾನಕರವಾಗಿ ನಡೆಯಿತು.
  

ಕೇರಳದ ಸ್ವಯಂಸೇವಾ ಸಂಘಟನೆಗಳಾದ ಶಾಂತಿಗ್ರಾಮ, ಸೆಂಟರ್ ಫಾರ್ ಇನ್ನೋವೇಷನ್ ಇನ್ ಸೈನ್ಸ್ ಅಂಡ್ ಸೋಶಿಯಲ್ ಆಕ್ಷನ್  ಸೆಂಟರ್ ಫಾರ್ ಕಲೆಕ್ಟಿವ್ ಲರ್ನಿಂಗ್ ಮತ್ತು ಕೇರಳ ಸರಕಾರದ ಸಹಯೋಜನೆಯಲ್ಲಿ ವಿಚಾರ ಸಂಕಿರಣ-ಹಲಸು ಆಹಾರ ವಸ್ತು ಪ್ರದರ್ಶನ ನಡೆಯಿತು. ಇದಕ್ಕಾಗಿ ತಿರುವಂತನಪುರ ನಗರದಲ್ಲಿರುವ ಕನಕ ಕುನ್ನು ಅಂಗಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಜೂನ್ 4. ಸಮಾವೇಶದ ಮೊದಲ ದಿನ. ಅಂದು ಬೆಳಿಗ್ಗೆ 10 ಗಂಟೆ ವೇಳೆಗೆ ಕನಕ ಕುನ್ನುವಿನ ಹೊರ ದ್ವಾರದ ಬಳಿಯಿರುವ ಸಭಾಂಗಣದಲ್ಲಿ ಸಾಕಷ್ಟು ಮಂದಿ ನೆರೆದಿದ್ದರು. ಕೇರಳದ ವಿವಿಧ ಮೂಲೆಗಳಿಂದ ಅನೇಕ ಆಸಕ್ತರು ಆಗಮಿಸಿದ್ದರು. ಕೃಷಿಕರು, ಕೃಷಿ ವಲಯದ ಸ್ವಯಂಸೇವಾ ಸಂಘಟನೆ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ಮತ್ತು ಹಲಸಿನ ಮೌಲ್ಯವರ್ಧನೆಯಲ್ಲಿ ಆಸಕ್ತಿ ಇರುವ ವರ್ತಕರಿದ್ದರು. ಇವರಲ್ಲಿ ಕೃಷಿಕರ ಸಂಖ್ಯೆಯೇ ಕೊಂಚ ಹೆಚ್ಚಿತ್ತು. ಇದು ಕೂಡ ಸಂಘಟಕರ ಆಶಯವಾಗಿತ್ತು.

ಮೊದಲಿಗೆ ಬಹುದೂರದ ಹವಾಯಿಯಿಂದ ಬಂದಿದ್ದ ಕೆನ್ ಲವ್ ಅವರ ಉಪನ್ಯಾಸ. ಇವರು ಹವಾಯಿಯ ಟ್ರಾಫಿಕಲ್ ಫ್ರುಟ್ ಗ್ರೋವರ್ಸ್ ಅಸೋಷಿಯೇಷನ್ ಅಧ್ಯಕ್ಷರು. ವಿದೇಶಗಳಲ್ಲಿ ಹಲಸಿನ ಹಣ್ಣಿನ ವಿವಿಧ ಉಪಯೋಗ, ಅಲ್ಲಿ ಆಗಿರುವ ಮೌಲ್ಯವರ್ಧನೆ ಕಾರ್ಯ ಇವರಲ್ಲಿ ಆಶ್ಚರ್ಯ ಉಂಟು ಮಾಡಿತು. ಶ್ರೀಲಂಕಾದಲ್ಲಿ ಹಲಸು ಬಹುಮುಖ್ಯ ಬೆಳೆಯಾಗಿ ಯಶಸ್ವಿಯಾಗಿರುವುದನ್ನು ಮತ್ತು ಕಾರಣದಿಂದಲೇ ಅಲ್ಲಿನವರು ಎಂಥ ಬರ ಬರಸ್ಥಿತಿಗೂ ಅಂಜದ ಮನೋಸ್ಥಿತಿ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು. ನಂತರ ಎರಡು ದಿನಗಳ ಕಾಲ ಪವರ್ ಪಾಯಿಂಟ್ ಬಳಸಿ ವಿಶೇಷ ಉಪನ್ಯಾಸ ನೀಡಿದವರೆಲ್ಲರೂ ಹಲಸು, ಅದರ ವಿವಿಧ ತಳಿಗಳು, ಹಣ್ಣಿನ ಮೌಲ್ಯವರ್ಧನೆ ಮತ್ತು ಜಾರಿಯಾಗಬೇಕಿರುವ ಯೋಜನೆಗಳ ಬಗ್ಗೆ ಆಸಕ್ತಿಕರ ವಿವರ ನೀಡಿದರು.

ಪಕ್ಕದಲ್ಲಿಯೇ ಹಲಸಿನ ವಿವಿಧ ರೀತಿಯ ಮೌಲ್ಯವರ್ಧಿತ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯದಲ್ಲಿ ಭಾಗಿಯಾಗಿರುವ ಕೇರಳದ ಅನೇಕ ಸಣ್ಣ-ಮಧ್ಯಮ-ಬೃಹತ್ ಪ್ರಮಾಣದ ತಯಾರಕರು ಸಾಕಷ್ಟು ಸಂಖ್ಯೆಯಲ್ಲಿ ಅತ್ಯುತ್ಸಾಹದಿಂದ ಮಳಿಗೆಗಳನ್ನು ತೆರೆದಿದ್ದರು. 60ಕ್ಕೂ ಹೆಚ್ಚು ಮಳಿಗೆಗಳು ಅಲ್ಲಿದ್ದವು. ಕೇರಳದಲ್ಲಿ ಹಲಸಿನ ಮೌಲ್ಯವರ್ಧನೆ ಅಕ್ಷರಶಃ ಒಂದು ಬೃಹತ್ ಉದ್ಯಮವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಬೃಹತ್ ಆಗಿ ಬೆಳೆಯುವ ಎಲ್ಲ ಲಕ್ಷಣಗಳು ಅಲ್ಲಿ ಗೋಚರಿಸುತ್ತಿದ್ದವು. ಪದೇಪದೇ ಕೇರಳ ಪ್ರವಾಸ ಮಾಡುತ್ತೇನಾದರೂ ಒಂದೇ ಸ್ಥಳದಲ್ಲಿ ಹಲಸಿನ ಅಷ್ಟೊಂದು ವೈವಿಧ್ಯಮಯ ತಿನಿಸುಗಳನ್ನು ನೋಡಿದ್ದು ಅದೇ ಮೊದಲು. ಎಲ್ಲ ತಿನಿಸುಗಳನ್ನು ಖರೀದಿಸಿ ತಿಂದೆನಾದರೂ ಹೊಟ್ಟೆ ಕೆಡಲಿಲ್ಲ ಎಂಬುದು ಕೂಡ ಗಮನಾರ್ಹವೇ


ಅಲ್ಲಿ ತಿನಿಸುಗಳು ಮಾತ್ರವೇ ಇರಲಿಲ್ಲ. ಹಲಸು ಕುರಿತ ಮಾಹಿತಿ ಭಂಡಾರವೇ ಅಲ್ಲಿತ್ತು. ಸಿಡಿಗಳು, ಡಿವಿಡಿಗಳು. ಪುಸ್ತಕಗಳು ದೊರೆಯುತ್ತಿದ್ದವು. ಅಲ್ಲಿನ ಕೃಷಿವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿದ ಹಲಸು ತಳಿಗಳ ಪ್ರದರ್ಶನ ಮತ್ತು ಮಾರಾಟವಿತ್ತು. ಹಲಸಿಗೆ ಸಂಬಧಿಸಿದ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಕೇರಳ ಕೃಷಿ ವಿಶ್ವವಿದ್ಯಾಲಯದ ನುರಿತ ಸಿಬ್ಬಂದಿ ಆಸಕ್ತರಿಗೆ ಸಾಕಷ್ಟು ಮಾಹಿತಿ ಒದಗಿಸುತ್ತಿದ್ದರು. ಇದಲ್ಲದೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಕೂಡ ಮಳಿಗೆಗಳನ್ನು ತೆರೆದು ಹಲಸು ಕೃಷಿ ಕ್ಷೇತ್ರದಲ್ಲಿ ರೈತರಿಗೆ ತಮ್ಮಿಂದ ದೊರೆಯುವ ಸೌಲಭ್ಯಗಳ ವಿವರಗಳನ್ನು ನೀಡುತ್ತಿದ್ದರು. ವಿದೇಶಗಳಿಗೆ ಹಲಸಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕಂಪನಿಗಳು ಕೂಡ ಮಳಿಗೆಗಳನ್ನು ತೆರೆದು ತಮ್ಮ ತಯಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಿದ್ದರು.

ಹಲಸಿನ ವಿವಿಧ ರೀತಿಯ ಭರ್ಪಿ ಪೇಡಾ, ವೈವಿಧ್ಯಮಯ ಸ್ವಾದದ ಹಲ್ವಾಗಳು. ಜಾಮ್-ಜೆಲ್ಲಿಗಳು, ಪಪ್ಸ್, ದೋಸೆ, ಪಾಯಸ, ವಿವಿಧ ರೀತಿಯ ಖಾರ ತಿನಿಸುಗಳು ಮತ್ತು ಇನ್ನೂ ಅನೇಕ ವೈವಿಧ್ಯಮಯ ತಿನಿಸುಗಳು ಅಲ್ಲಿದ್ದವು.

ಕೇರಳದ ವಿವಿಧ ಭಾಗಗಳಲ್ಲಿ ಬೆಳೆಯುವ ಬೇರೆ ಬೇರೆ ತಳಿಯ ಹಣ್ಣುಗಳು ಸಹ ಅಲ್ಲಿ ಮಾರಾಟಕ್ಕಿದ್ದವು. ಇವುಗಳನ್ನು ಅಲ್ಲಿಯೇ ಸುಲಿದು ತೊಳೆಗಳನ್ನು ಉತ್ತಮ ದರ್ಜಿ ಪಾರದರ್ಶಕ ಪ್ಲಾಸ್ಟಿಕ್ ಬಾಕ್ಸ್ಗಳಲ್ಲಿ ಹಾಕಿ ಕವರ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಇದರ ಸ್ವಚ್ಚತೆಗೆ ಬಂದವರೆಲ್ಲರೂ ಆಕರ್ಷಿತರಾಗಿದ್ದರು. 10 ಮತ್ತು 20 ರುಪಾಯಿ ಮೌಲ್ಯದ ಹಲಸಿನ ತೊಳೆಯಿರುವ ಬಾಕ್ಸ್ಗಳನ್ನು ಖರೀದಿಸಿ ತೆರಳುತ್ತಿದ್ದರು. ತಳಿ ಮತ್ತು ಅದರ ರುಚಿ ವಿವರ ತಿಳಿಬಯಸುವವರು ಅಲ್ಲಿಯೇ ತೊಳೆಗಳನ್ನು ತಿಂದು ತಮ್ಮ ಅಭಿಪ್ರಾಯ ಸೂಚಿಸುತ್ತಿದ್ದರು. ಬೇರೆ ಬೇರೆ ಪ್ರಮಾಣದ ಟಿ.ಎಸ್.ಎಸ್.(ಟೋಟಲ್ ಸೊಲ್ಯುಬಲ್ ಶುಗರ್) ಇದ್ದ ಹಲಸಿನ ತೊಳೆಗಳು ಅಲ್ಲಿದ್ದವು. ಅವುಗಳ ರುಚಿ ಕೂಡ ಸ್ವಾದಿಷ್ಟಕರ.

ಹಲಸಿನ ಬೇರೆಬೇರೆ ತಳಿಯ ಸಸಿಗಳು ಸಹ ಅಲ್ಲಿ ಮಾರಾಟಕ್ಕೆ ಲಭ್ಯವಿದ್ದವು. ಮೂರು ದಿನವೂ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡಿ ತಿನಿಸುಗಳನ್ನು ಖರೀದಿಸುತ್ತಿದ್ದರು. ಹೆಚ್ಚಿನವರು ಕುತೂಹಲದಿಂದ ತಮಗೆ ಅಗತ್ಯವೆನಿಸಿದ ಮಾಹಿತಿ ಪಡೆಯುತ್ತಿದ್ದರು. ವಿವಿಧ ತಳಿಗಳ ಸಸಿಗಳು ಒಂದೆಡೆಯೇ ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದ ಕಾರಣ ಸಾಕಷ್ಟು ಮಂದಿ ಉತ್ಸಾಹಿ ಕೃಷಿಕರು ಅವುಗಳನನು ಖರೀದಿಸಿ-ಮಾಹಿತಿ ಪಡೆದು ಲಗುಬಗೆಯಿಂದ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸ್ತ್ರೀ ಶಕ್ತಿ ಸಂಘಟನೆಗಳು
  
ಕೇರಳದಲ್ಲಿ ಸ್ತ್ರೀ ಶಕ್ತಿ ಸಂಘಟನೆಗಳು ವ್ಯಾಪಕವಾಗಿವೆ. ಇಂಥ ಅನೇಕ ಗುಂಪುಗಳು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ-ಮಾರಾಟದಲ್ಲಿಯೂ ತೊಡಗಿಸಿಕೊಂಡಿವೆ. ತಮ್ಮ ಸದಸ್ಯೆಯರು ಆಥರ್ಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಮಾರ್ಗದರ್ಶನವನ್ನೂ ಮಾಡುತ್ತಿವೆ. ವಿಶೇಷವಾಗಿ ಹಲಸು ಮೌಲ್ಯವಧನೆಯಲ್ಲಿ ತೊಡಗಿಸಿಕೊಂಡ ಸಂಘಗಳೂ ಇವೆ. ಸ್ವತಃ ಇಂಥ ಒಂದು ಸಂಘಟನೆಯ ಸ್ಥಾಪಕರಾದ ತಿರುವಂತನಪುರದ ನಿವಾಸಿ ಜಯಕುಮಾರಿ ತಮ್ಮ ಯಶೋಗಾಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. 'ಕೇರಳಿಗರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಅಚ್ಚುಕಟ್ಟಾಗಿ ಮಾಡಿದಾಗ ತುಂಬ ಪ್ರೋತ್ಸಾಹಿಸುತ್ತಾರೆ. ರುಚಿ ಜೊತೆಗೆ ಶುಚಿಯೂ ಮುಖ್ಯ. ಅಂಶಗಳು ಇರುವಂಥ ಮೌಲ್ಯವರ್ಧನೆ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಕೆಲವಾರು ಸದಸ್ಯೆಯರ ಸಹಕಾರದಿಂದ ಮನೆಯಲ್ಲಿಯೇ ಹಲಸಿನ ಜಾಮ್-ಜೆಲ್ಲಿ, ಹಪ್ಪಳ ತಯಾರು ಮಾಡಿ ಮಾರಾಟ ಮಾಡುತ್ತಿದ್ದೇನೆ. ಇದುವರೆಗೂ ಉತ್ಪನ್ನಗಳು ತಯಾರಿಸಿದ ಎರಡು ದಿನಗಳ ಒಳಗೆ ಖಾಲಿಯಾಗದೇ ಉಳಿದ ಉದಾಹರಣೆಗಳೇ ಇಲ್ಲ' ಮಾತು ಕೇರಳದಲ್ಲಿನ ಮೌಲ್ಯವರ್ಧನೆ ಕಾರ್ಯ ಮತ್ತು ಅಲ್ಲಿನ ಗ್ರಾಹಕರ ಆಸಕ್ತಿಯನ್ನ ಬಿಂಬಿಸುತ್ತದೆ ಅಲ್ಲವೇ. ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು ಮತ್ತು ಮುಂದೆ ತೊಡಗಿಸಿಕೊಳ್ಳಲಿರುವವರ ಉತ್ತೇಜನಕ್ಕೆ ಕೇರಳ ಸರಕಾರ ಕೂಡ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂಬುದು ಕೂಡ ಗಮನಾರ್ಹ.

ಪೇಢಾ ಮತ್ತು ಐಸ್ ಕ್ರೀಮ್
ಪೇಢಾ ಎಂದರೆ ನಮ್ಮ ಕಣ್ಮುಂದೆ ಹಾಲು ಖೋವಾದಿಂದ ಮಾಡಿದ ತಿನಿಸು ಬರುತ್ತದೆಯಲ್ಲವೇ. ಕೇರಳದ ಮಿಲ್ಟೋ ಕಂಪನಿಯವರು ಹಲಸಿನಿಂದ ಖೋವಾ ಅಲ್ಲದೇ ಭಪರ್ಿಗಳನ್ನೂ ಮಾಡಿದ್ದಾರೆ. ರುಚಿಯಲ್ಲಿ ಹಾಲಿನ ಖೋವಾ ಪೇಡಾವನ್ನು ಹಲಸಿನ ಪೇಢಾ ಸರಿಗಟ್ಟುತ್ತದೆ. ಇಂಥ ಪೇಡಗಳನ್ನು ಅಚ್ಚುಕಟ್ಟಾಗಿ ಬೇರೆ ಬೇರೆ ಅಳತೆಯಲ್ಲಿ ಗುಣಮಟ್ಟದ ಪ್ಯಾಕಿಂಗ್ ಉತ್ನನ್ನ ಬಳಸಿ ಪ್ಯಾಕ್ ಮಾಡಲಾಗಿದೆ. ಪೇಢಾ ಮತ್ತು ಭಪರ್ಿ ರುಚಿಗೆ ಮನಸೋತ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಖರೀದಿಸುತ್ತಿದ್ದರು. ಇದರ ಬೇಡಿಕೆ ಎಷ್ಟಿತ್ತೆಂದರೆ ಒಂದೂವರೆ ದಿನದಲ್ಲಿಯೇ ಮಿಲ್ಟೋ ಕಂಪನಿಯವರು ತಂದಿದ್ದ ಸ್ಟಾಕ್ ಖಾಲಿಯಾಗಿತ್ತು.

  
ಕನ್ನಡಿಗರೇ ಆದ ಆರ್.ಎಸ್.ಕಾಮತ್ ಅವರು ಮುಂಬೈಯಲ್ಲಿ ನ್ಯಾಚುರಲ್ ಐಸ್ ಕ್ರೀಮ್ ಹೆಸರಿನ ಬೃಹತ್ ಘಟಕದ ಮಾಲೀಕರು. ಇವರು ಹಲಸಿನಿಂದ ಐಸ್ ಕ್ರೀಮ್ ಮಾಡುವ ಬಗ್ಗೆ ಆಸಕ್ತಿ ತಳೆದು ಅದರ ಬಗ್ಗೆ ಅಧ್ಯಯನ ನಡೆಸಿ ತಯಾರಿಯಲ್ಲಿಯೂ ಯಶಸ್ವಿಯಾಗಿದ್ದಾರೆ. ಇವರು ದಿಶೆಯಲ್ಲಿ ತಮಿಳುನಾಡಿನ ವಿಶೇಷ ಪನ್ರುತಿ ಹಲಸನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುವ ಯೋಜನೆ ಹೊಂದಿದ್ದಾರೆ. ಇವರು ದೂರದ ಮುಂಬೈನಿಂದ ಹಲಸಿನಿಂದ ಮಾಡಿದ ಐಸ್ ಕ್ರೀಮ್ ಸರಕನ್ನು ತಂದಿದ್ದರು. ವಿಚಾರ ಸಂಕಿರಣದ ಪ್ರತಿನಿಧಿಗಳಿಗೆ ಅಕ್ಕರೆಯಿಂದ ವಿತರಿಸಿದರು. ಇದು ಅದೆಷ್ಟು ಸವಿಯಾಗಿತ್ತೆಂದರೆ ಕರ್ನಾಟಕದಿಂದ ತೆರಳಿದ್ದ ನಾನು ಮತ್ತು ಇನ್ನು ಒಂದಿಬ್ಬರು ಸಂಕೋಚವಿಲ್ಲದೇ ಮೂರ್ನಾಲ್ಕು ಐಸ್ಕ್ರೀಮ್ ಸವಿದೆವು.

1 comment:

ವಿಡಿಯೋ